Wednesday 26 December 2012

ಏರಿ ಮೇಲೆ ಹೋರಿ ಹೊಡ್ಕೊಂಡ್

ಏರಿ ಮೇಲೆ ಹೋರಿ ಹೊಡ್ಕೊಂಡ್
ನನ್ ಪಾಡಿಗ್ ನಾನು
ತಲೆ ಮೇಲೆ ಹೊರೆ ಹೊತ್ಕೊಂಡ್
ಮನೆ ಕಡೆ ಹೊಂಟಿದ್ದೆ

ಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್
ಚೆನ್ನಿ ಬರ್ತಾ ಇದ್ಲು
ಹೋರಿ ಕಡೆ ಗುರಿ ಮಾಡಿ
ಬಂದು ಗುದ್ದೆ ಬಿಟ್ಳು

ಹೋರಿ ಕೋಪ ನೆತ್ತಿಗೇರಿ
ಬಿತ್ತು ಸೈಕಲ್ ಕೆರೆ ಒಳ್ಗೆ
ಬೀದಿ ಬಸ್ವಿಯನ್ಗೆ ಆಡ್ತಿದ್ದ
ಚೆನ್ನಿ ಬಿದ್ಲು ಏರಿ ಕೆಳ್ಗೆ

ಸಿಟ್ಟಿಗೆದ್ದ ಚೆನ್ನಿ ಅಪ್ಪ
ಓಡಿ ಬಂದ ಮನೆ ಹತ್ರ
ಮಗಳಿಗಾಗಿದ್ದ ಸ್ಥಿತಿ ಕಂಡು
ಏಗರಾಡ್ತಿದ್ದ ನೋಡ್ರಪ್ಪ

ನೀವೇ ಕೊಡ್ಬೇಕು ಒಳ್ಳೇ ತೀರ್ಪು
ಅವ್ಳು ಮಾಡಿದ್ದು ಸರಿನಾ
ಇಲ್ಲ
ಹೋರಿ ಸಾಕಿದ್ದ್  ತಪ್ಪಾ  ನಾ!

            ಸೋಮೇಶ್ ಗೌಡ

Wednesday 19 December 2012

ಅಲ್ಲೇನಾಗಿರಬಹುದು.....???

ಹೀಗೊಂದು ಜರ್ನಿ
ಚಳಿಯ ಜೊತೆಯಲ್ಲಿ
ಮುಂಜಾನೆ 6 ಗಂಟೆ ಬಸ್ಸಲ್ಲಿ
ಮೈಯೆಲ್ಲಾ ನಡುಗುತ್ತಿತ್ತು
ಮನಸ್ಸು ಬೇಗ ತಲುಪ ಬಯಸಿತ್ತು
ಕಾಲೇಜ್ ಹುಡುಗರ ಮೊಬೈಲ್ ಗಳಿಂದ
ಹಾಡು ಕಿವಿಗೆ ಬಡಿಯುತ್ತಿತ್ತು
ಹಬ್ಬಾ! ಬಸ್ಸಂತೂ ಪೂರ್ತಿ ತುಂಬಿತ್ತು

ಕಂಡಕ್ಟರ್ ಕೆಲಸದಲ್ಲಿ ನಿರತ
ಡ್ರೈವರ್ ಚಾಲನೆಯಲ್ಲಿ ನುರಿತ
ಕಾಲೇಜ್ ಹುಡುಗಿಯರ ಪಿಸುಮಾತು
ಅಲ್ಲೂ ಪ್ರಚಲಿತ
ನಾನು ಮಾತ್ರ ನಗುತ್ತಿದ್ದೆ ಎಲ್ಲರ ಗಮನಿಸುತ್ತಾ

ಎಲ್ಲರೂ ವಿಧ ವಿಧ ಕಾರ್ಯಗಳಲ್ಲಿ ಮಗ್ನರಾಗಿದ್ದರು
ಹಿಂದಿನ ಸೀಟಿನಲ್ಲಿ ಒಬ್ಬ ನಿದ್ರೆಗೆ ಶರಣಾಗಿದ್ದ
ಪಕ್ಕದಲ್ಲಿ ಕುಳಿತ್ತಿದ್ದ ಹುಡುಗಿಯ ಮೇಲೆ
ಜಾರಿ ಜಾರಿ ಬೀಳುತ್ತಿದ್ದ

ಅವನ ವರ್ತನೆ ಹುಡುಗಿಗೆ
ಹಿಂಸೆಯಾಗಿತ್ತೋ ಏನೋ
ಒಂದೆರಡು ಬಾರಿ ಸಹಿಸಿದ್ದಳು
ಮೂರನೇ ಬಾರಿ ಅದೇನಾಯ್ತೋ ಏನೋ
ಅವನ ತಲೆಯನ್ನು ಹಿಡಿದು
ಮುಂದಿನ ಸೀಟಿನ ಕಂಬಿಗೆ
ದಬ ದಬನೆ ಗುದ್ದೆ ಬಿಟ್ಟಳು

ಪಟ್ಟನೆ ಎಚ್ಚರಗೊಂಡ ಅವನು
ಒಂದೇ ಸಮನೆ ಅಳತೊಡಗಿದ
ಪಾಪ ನೋವಾಗಿತ್ತೋ ಏನೋ!
ಇದ್ದಕ್ಕಿದ್ದಂತೆ ಶಾಂತನಾದವನೆ
ಅವಳನ್ನು ಗುರಾಯಿಸತೊಡಗಿದ

ಇಬ್ಬರಲ್ಲೂ ಮೌನ
ಮಾತಿಲ್ಲ, ಕಥೆಯಿಲ್ಲ
ಮುಂದೇನಾಗಬಹುದೆಂದೂ
ಎದುರು ನೋಡುತ್ತಿದ್ದೆ. ......

ಛೇ.. ಬಸ್ ಆಗಲೇ ಸ್ಟಾಂಡ್ ಗೆ ಬಂದು ಬಿಟ್ಟಿತ್ತು
ನಾನು ಕೆಳಗೆ ಇಳಿಯಬೇಕಾಯ್ತು
ನನ್ನ ದಾರಿ ಹಿಡಿದು ನಾನು ಸಾಗಿದೆ
ಮನಸ್ಸು ಮಾತ್ರ ಕೊರಗುತ್ತಿತ್ತು..
ಅಲ್ಲೇನಾಗಿರಬಹುದು.....???

             -ಸೋಮೇಶ್ ಎನ್ ಗೌಡ

Wednesday 12 December 2012

ಉತ್ತಮ ಭವಿಷ್ಯಕ್ಕಾಗಿ ಜಲ ಹೋರಾಟ


ಈ ಹೋರಾಟಕೆ ಕೈ ಜೋಡಿಸಿ ಹೋರಾಡು ಬಾ ಗೆಳೆಯ
ರೈತನ ಉಳಿವಿಗಾಗಿ ಪಣ ತೊಟ್ಟು ಬಾ ಗೆಳೆಯ

ಮುನ್ನುಗ್ಗಿ ನಡೆಯಬೇಕು ನಾವು ನೀರಾವರಿಗಾಗಿ ಇಂದೆ
ಮಳೆಯನ್ನೇ ನಂಬಿ ಬದುಕಲಾರೆವು ಇನ್ನು ಮುಂದೆ
ಕೆರೆ ಕಟ್ಟೆಗಳು ಬತ್ತಿವೆ ದನ ಕರುಗಳು ನರಳುತ್ತಿವೆ
ಬೆಳೆಯು ನಾಶವಾಗುತ್ತಿರಲು ರೈತನ ಒಡಲು ಸುಟ್ಟಿದೆ

ಕನಸೆಲ್ಲ ಕಮರಿದೆ ಕ್ರಾಂತಿ ಗೀತೆ ಮೂಡಿದೆ
ನಮ್ಮ ಉಳಿವಿಗಾಗಿ ನಾವು ಹೋರಾಡಲೇ ಬೇಕಿದೆ
ಜಲದ ಬೆಲೆಯ ತಿಳಿಯದೆ ಹಾಳು ಮಾಡಬೇಡಿರಿ
ಅನ್ನ ನೀಡೋ ರೈತನ ರಕ್ಷಣೆಗೆ ಬನ್ನಿರಿ

ಉತ್ತಮ ಭವಿಷ್ಯಕ್ಕೆ ಬೇಕು ನೀರಾವರಿ ವ್ಯವಸ್ತೆ
ಮುಂದಿನ ಪೀಳಿಗೆ ಬರದಿರಲಿ ಈ ಅವಸ್ತೆ
ಮುಂದೆ ಆಗೋ ಅನಾಹುತದ ಚಿಂತೆ ಮಾಡಬೇಕಿದೆ
ಇಂದೆ ನಾವು ಛಲವ ತೊಟ್ಟು ಫಲವ ಪಡೆಯಬೇಕಿದೆ.|

ಈ ಹೋರಾಟಕೆ ಕೈ ಜೋಡಿಸಿ ಹೋರಾಡು ಬಾ ಗೆಳೆಯ
ರೈತನ ಉಳಿವಿಗಾಗಿ ಪಣ ತೊಟ್ಟು ಬಾ ಗೆಳೆಯ...ಬಾ ಗೆಳೆಯ

                                     ಸೋಮೇಶ್  ಎನ್ ಗೌಡ

Tuesday 11 December 2012

ಒಲವಿನ ಕರೆ

ಮುಂಜಾನೆ ಹೊತ್ತಲ್ಲಿ ಮಂಜು ಕವಿದ ಹಾಗೆ
ಮುಸ್ಸಂಜೆ ಹೊತ್ತಲ್ಲಿ ಗಾಳಿ ಬೀಸುವ ಹಾಗೆ
ಮಳೆ ಹನಿಗಳು ಅಪ್ಪುವ ಹಾಗೆ,
ಮನಸ್ಸು ಮನಸ್ಸು ಸೇರಿದ ಹಾಗೆ
ಆವರಿಸು ನೀ ನನ್ನನು
ಸ್ವೀಕರಿಸು ಈ ಒಲವಿನ ಕರೆಯನು

ಕನ್ನಡಿಯಲು ನಿನ್ನನೆ ಕಂಡೆ
ನಗುತ ನಗುತ ಮೌನದಿ ನಿಂತೆ
ಮೋಡ ಚಿತ್ರಿಸಿದ ನಿನ್ನಯ ಹೆಸರ
ಕಂಡು ಬೆಚ್ಚಿ ಬೆರಗಾಗೋದೆ
ನೀ ನನ್ನ ಒಲವು ಕಣೇ, ಈ ಹೃದಯದ ಅರಸಿ ಕಣೇ
ಬಾ ಬಂದು ನನ್ನ ಸೇರಿಕೋ
ನಿನ್ನ ತೋಳಿಂದ ನನ್ನ ಅಪ್ಪಿಕೊ

ಹೃದಯದ ಮಾತನ್ನು ಅರಿಯುವ ನಿನ್ನನ್ನು
ಪ್ರೇಯಸಿ ಎನ್ನುವ ಬದಲು ದೇವಿಯೆನ್ನಲೇನು
ಪ್ರೀತಿಯ ಒಳನೋಟ ಕಂಡಿರುವ ನಿನ್ನನ್ನು
ಎದೆಯೊಳಗೆ ಗುಡಿ ಕಟ್ಟಿ ಪೂಜಿಸಲೇನು
ಈ ನನ್ನ ಒಲವಿನ ಕರೆಯನ್ನೂ ಸ್ವೀಕರಿಸಿ
ಬಂದು ಸೇರು ನನ್ನ ಮುಗ್ದ ಮನಸನ್ನು.|

                          ಸೋಮೇಶ್ ಎನ್ ಗೌಡ

Monday 10 December 2012

ಕಣ್ಣ್ ಮುಚ್ಚಿ ನಾನಿಂದು ನೆನೆಯಬೇಕು ನಿನ್ನ.


ಕಣ್ಣ್ ಮುಚ್ಚಿ ನಾನಿಂದು ನೆನೆಯಬೇಕು ನಿನ್ನ
ನಿನ್ನ ಅಂತರಾಳವ ಅರಿಯಬೇಕು
ತುಂಟಿಯಂತೆ ಆಡೋ ನಿನ್ನ ಆ ಮನದೊಳಗೆ
ನನ್ನ ಈ ಮನಸಿಟ್ಟು ಬೆರೆಯಬೇಕು

ಮುತ್ತನ್ನು ಇಡಬೇಕು ನಿನ್ನ ಆ ಗಲ್ಲಕ್ಕೆ
ಜೇನಿನಂತೆ  ನಿನ್ನ ತುಟಿಯನ್ನು ಸವಿದು
ಪ್ರತಿಯೊಂದು ಕ್ಷಣದಲ್ಲೂ  ನೀ ನನ್ನ ಜೊತೆಯಲ್ಲಿ
ಇರಬೇಕು ಹೀಗೆ ನನ್ನೊಲವ ಅರಿತು

ಈ ಪುಟ್ಟ ಬದುಕಿನಲಿ ಒಲವೊಂದೇ ನಮಗಿರಲಿ
ನಗು ನಗುತ ಬಾಳೋಣ ನಾವೆಂದು ಹೀಗೆ
ನಿನ್ನಾಸೆ ನನ್ನಾಸೆ ಎರಡನ್ನೂ ಸೇರಿಸಿ
ಸಾಗೋಣ ನಮ್ಮ ದೋಣಿ ಮುಳುಗದ ಹಾಗೆ.


                  ಸೋಮೇಶ್ ಎನ್ ಗೌಡ