Tuesday 27 November 2012

ಚೆಲುವೆ


ನಿನ್ನ ಮೌನ ಕಾಡುವುದೆನ್ನ
ನುಡಿ ಮಾತನು ನನ್ನ ಕೋಗಿಲೆ
ನಿನ್ನ ಧ್ಯಾನ ಮಾಡುವಾಸೆ
ನನ್ನ ಭಕ್ತನ ಮಾಡಿಕೊ ಈಗಲೆ

ಕಪ್ಪು ಚುಕ್ಕೆ ಇರಲು
ನಿನ್ನ ಮುದ್ದು ಮುಖದ ಮೇಲೆ
ಹೆಚ್ಚುತಿಹುದು ದಿನೇ ದಿನೇ
ನಿನ್ನ ಸೌಂದರ್ಯದ ಕಳೆ

ಬೆಳ್ಳಿ ಅರಮನೆಯಲ್ಲಿ ಹುಟ್ಟಿ
ಬೆಳೆದ ಬಳ್ಳಿ ನೀನು ಚೆಲುವೆ
ಬಳುಕುವೆ ನನ್ನ ಸೆಳೆಯುವೆ
ಹೃದಯವ ಕದ್ದು ಹೀಗೇಕೆ ಕಾಡುವೆ

ಅದೆಷ್ಟು ಅಂತ ಹೊಗಳಲಿ, ನಾ ನಿನ್ನ ಚೆಲುವ
ಎಷ್ಟೇ ಹೇಳಿದರು ಮರೆಯಲಾಗದು,ನಾ ನಿನ್ನ ಒಲವ

                     -ಸೋಮೇಶ್ ಎನ್ ಗೌಡ

Tuesday 20 November 2012

ರೈತನ ಕೂಗು

ಮೋಡ ಬಿತ್ತಿ ಮಳೆ ತರುವುದೆಲ್ಲಿ
ಹೊಲವ ಬಿತ್ತಿ ಕಳೆ ಕೀಳುವುದೆಲ್ಲಿ
ಆಸೆ ಬಿತ್ತಿ ಕನಸ ಕಾಣುವುದೆಲ್ಲಿ
ಬರಗಾಲ ಬಂದು ಬರಡಾಗೈತೆ ಬದುಕು
ಇನ್ನೆಲ್ಲಿದೆ ನಮ್ಮ ಬಾಳಲ್ಲಿ ಬೆಳಕು

ಸೂರ್ಯ ಚಂದ್ರ ಇರುವವರೆಗೂ
ದುಡಿಯಬೇಕೆಂಬ ನಮ್ಮಯ ಛಲವು
ಕುಗ್ಗೈತಿ ನೋಡು ಇಲ್ಲಿ
ಮತ್ತೆ ಬಡಿದೆಬ್ಬಿಸುವವರು ಯಾರಿಲ್ಲಿ

ಕೆರೆಯೂ ಬತ್ತಿ ಹೋಯ್ತು
ಮಮತೆ ಪ್ರೀತಿ ಮಾಯವಾಯ್ತು
ಅಳಲು ಕಣ್ನೀರೆ ಖಾಲಿಯಾಗಿರಲು
ಈ ಕಷ್ಟಗಳಿಗೆ ಕೊನೆ ಸಿಗುವುದು ಯಾವತ್ತು.

                     -ಸೋಮೇಶ್ ಎನ್ ಗೌಡ

ಪಾಳು ಮನೆ

ಪಾಳು ಮನೆಯ ಮುಂದೆ
ಒಂದು ಬೋಳು ಮರವ ಕಂಡೆ
ಆ ಬೋಳು ಮರದ ಕೆಳಗೆ ಕೂತು
ಗೋಳಾಡುತ್ತಿದ್ದ ಒಬ್ಬ ತಂದೆ

ಮುಂದೆ ದಾರಿಯಿಲ್ಲ
ನನಗೆ ಹಿಂದೆ ಗುರುವು ಇಲ್ಲ
ತುಂಡು ಬೀಡಿಯೊಂದೆ ನನ್ನ ಜೀವನದಲ್ಲೆಲ್ಲಾ

ಇದ್ದ ಒಬ್ಬ ಮಗನೂ ನನ್ನ ಮೂಲೆ ಗುಂಪು ಮಾಡಿ
ಬಿಟ್ಟು ಹೊರಟು ಹೋದ ತನ್ನ ನಲ್ಲೆಯ ಜೊತೆಗೂಡಿ

ಇಂದು ನನ್ನ ಮನೆಯು ಪಾಳು ಬಿದ್ದೈತೆ
ನಾ ನೆಟ್ಟಿದ್ದ ಮರವು ಬೋಳು ಆಗೈತೆ
ಕನಸೆಲ್ಲಾ ದೂರಾಗಿ ಉಸಿರೆಲ್ಲಾ ಬೇರಾಗಿ
ಈ ದೇಹ ಮಾತ್ರ ಗೊಳಾಡ್ತೈತೆ.|

           -ಸೋಮೇಶ್ ಎನ್ ಗೌಡ

Wednesday 7 November 2012

ಅಮ್ಮನ ಅರಮನೆಯಲ್ಲಿ ಗುಮ್ಮ

ಅಮ್ಮನ ಅರಮನೆಯಲ್ಲೊಂದು ದಿನ 
ಗುಮ್ಮನ ಕಂಡೆನು ಹೆದರುತಲಿ
ಕೂಗುತ,ಕುಣಿಯುತ ಓಡಾಡುತ್ತಿತ್ತು
ಮನೆಯೊಳಗೆಲ್ಲಾ ಹರುಷದಲಿ

ಕೂದಲು ನೆಲವನ್ನು ಮುಟ್ಟಿತ್ತು
ಉಗುರುಗಳ ಉದ್ದನೆ ಬೆಳೆಸಿತ್ತು
ನಾಲಿಗೆ ಚಾಚಿ ನಗುತ್ತಾ ನಗುತ್ತಾ
ಮನೆಯೊಳಗೆಲ್ಲಾ ನಲಿದಾಡುತ್ತಿತ್ತು

ನಾ ಹೆದರುತ ಮನೆ ಹೊರಗೆ ಓಡಿದೆನು
ಅಮ್ಮನ ಕಾಣದೆ ಅಳತೊಡಗಿದೆನು
ಬಳಿ ಬಂದಳು ಅಮ್ಮ ಓಡೋಡಿ
ಮನೆಬಿಟ್ಟು ಗುಮ್ಮ ಪರಾರಿ.|

                    -ಸೋಮೇಶ್ ಎನ್ ಗೌಡ

Sunday 4 November 2012

ಮತ್ತೇರಿಸಿದ ಸಿಹಿಮುತ್ತು.

ಕಾದ ಬಂಡೆಯಂತೆ ಮೈಯಾಯ್ತು
ಎದೆಯ ಬಡಿತ ಹೆಚ್ಚಾಯ್ತು
ಇದ್ದಕ್ಕಿದಂತೆ ತಲೆ ತಿರುಗಿತು
ಅವಳು ಕೊಟ್ಟ ಸಿಹಿಮುತ್ತಿನಿಂದ
ಹೀಗೆಲ್ಲಾ ನನಗಾಗಿತ್ತು

ಮನಸ್ಸು ಹೂವಾಯ್ತು
ಕೆನ್ನೆ ಕೆಂಪಾಯ್ತು
ಕಣ್ಣಲ್ಲಿ ಹೊಸ ಕಾಂತಿ ಮೂಡಿತ್ತು
ಅವಳು ಕೊಟ್ಟ ಸಿಹಿಮುತ್ತಿನಿಂದ
ಹೀಗೆಲ್ಲಾ ನನಗಾಗಿತ್ತು

ನನ್ನನ್ನೇ ನಾ ಮರೆತು
ಅವಳ ಹೃದಯದಲ್ಲಿ ಕೂತು
ನಿದ್ದೆ ಮಾಡಿದ ಅನುಭವವಾಯ್ತು
ಅವಳು ಕೊಟ್ಟ ಸಿಹಿಮುತ್ತಿನಿಂದ
ಹೀಗೆಲ್ಲಾ ನನಗಾಗಿತ್ತು
ಮೆಲ್ಲನೆ ಮತ್ತು ನೆತ್ತಿಗೇರಿತ್ತು!

    -ಸೋಮೇಶ್ ಎನ್ ಗೌಡ