Wednesday 26 December 2012

ಏರಿ ಮೇಲೆ ಹೋರಿ ಹೊಡ್ಕೊಂಡ್

ಏರಿ ಮೇಲೆ ಹೋರಿ ಹೊಡ್ಕೊಂಡ್
ನನ್ ಪಾಡಿಗ್ ನಾನು
ತಲೆ ಮೇಲೆ ಹೊರೆ ಹೊತ್ಕೊಂಡ್
ಮನೆ ಕಡೆ ಹೊಂಟಿದ್ದೆ

ಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್
ಚೆನ್ನಿ ಬರ್ತಾ ಇದ್ಲು
ಹೋರಿ ಕಡೆ ಗುರಿ ಮಾಡಿ
ಬಂದು ಗುದ್ದೆ ಬಿಟ್ಳು

ಹೋರಿ ಕೋಪ ನೆತ್ತಿಗೇರಿ
ಬಿತ್ತು ಸೈಕಲ್ ಕೆರೆ ಒಳ್ಗೆ
ಬೀದಿ ಬಸ್ವಿಯನ್ಗೆ ಆಡ್ತಿದ್ದ
ಚೆನ್ನಿ ಬಿದ್ಲು ಏರಿ ಕೆಳ್ಗೆ

ಸಿಟ್ಟಿಗೆದ್ದ ಚೆನ್ನಿ ಅಪ್ಪ
ಓಡಿ ಬಂದ ಮನೆ ಹತ್ರ
ಮಗಳಿಗಾಗಿದ್ದ ಸ್ಥಿತಿ ಕಂಡು
ಏಗರಾಡ್ತಿದ್ದ ನೋಡ್ರಪ್ಪ

ನೀವೇ ಕೊಡ್ಬೇಕು ಒಳ್ಳೇ ತೀರ್ಪು
ಅವ್ಳು ಮಾಡಿದ್ದು ಸರಿನಾ
ಇಲ್ಲ
ಹೋರಿ ಸಾಕಿದ್ದ್  ತಪ್ಪಾ  ನಾ!

            ಸೋಮೇಶ್ ಗೌಡ

Wednesday 19 December 2012

ಅಲ್ಲೇನಾಗಿರಬಹುದು.....???

ಹೀಗೊಂದು ಜರ್ನಿ
ಚಳಿಯ ಜೊತೆಯಲ್ಲಿ
ಮುಂಜಾನೆ 6 ಗಂಟೆ ಬಸ್ಸಲ್ಲಿ
ಮೈಯೆಲ್ಲಾ ನಡುಗುತ್ತಿತ್ತು
ಮನಸ್ಸು ಬೇಗ ತಲುಪ ಬಯಸಿತ್ತು
ಕಾಲೇಜ್ ಹುಡುಗರ ಮೊಬೈಲ್ ಗಳಿಂದ
ಹಾಡು ಕಿವಿಗೆ ಬಡಿಯುತ್ತಿತ್ತು
ಹಬ್ಬಾ! ಬಸ್ಸಂತೂ ಪೂರ್ತಿ ತುಂಬಿತ್ತು

ಕಂಡಕ್ಟರ್ ಕೆಲಸದಲ್ಲಿ ನಿರತ
ಡ್ರೈವರ್ ಚಾಲನೆಯಲ್ಲಿ ನುರಿತ
ಕಾಲೇಜ್ ಹುಡುಗಿಯರ ಪಿಸುಮಾತು
ಅಲ್ಲೂ ಪ್ರಚಲಿತ
ನಾನು ಮಾತ್ರ ನಗುತ್ತಿದ್ದೆ ಎಲ್ಲರ ಗಮನಿಸುತ್ತಾ

ಎಲ್ಲರೂ ವಿಧ ವಿಧ ಕಾರ್ಯಗಳಲ್ಲಿ ಮಗ್ನರಾಗಿದ್ದರು
ಹಿಂದಿನ ಸೀಟಿನಲ್ಲಿ ಒಬ್ಬ ನಿದ್ರೆಗೆ ಶರಣಾಗಿದ್ದ
ಪಕ್ಕದಲ್ಲಿ ಕುಳಿತ್ತಿದ್ದ ಹುಡುಗಿಯ ಮೇಲೆ
ಜಾರಿ ಜಾರಿ ಬೀಳುತ್ತಿದ್ದ

ಅವನ ವರ್ತನೆ ಹುಡುಗಿಗೆ
ಹಿಂಸೆಯಾಗಿತ್ತೋ ಏನೋ
ಒಂದೆರಡು ಬಾರಿ ಸಹಿಸಿದ್ದಳು
ಮೂರನೇ ಬಾರಿ ಅದೇನಾಯ್ತೋ ಏನೋ
ಅವನ ತಲೆಯನ್ನು ಹಿಡಿದು
ಮುಂದಿನ ಸೀಟಿನ ಕಂಬಿಗೆ
ದಬ ದಬನೆ ಗುದ್ದೆ ಬಿಟ್ಟಳು

ಪಟ್ಟನೆ ಎಚ್ಚರಗೊಂಡ ಅವನು
ಒಂದೇ ಸಮನೆ ಅಳತೊಡಗಿದ
ಪಾಪ ನೋವಾಗಿತ್ತೋ ಏನೋ!
ಇದ್ದಕ್ಕಿದ್ದಂತೆ ಶಾಂತನಾದವನೆ
ಅವಳನ್ನು ಗುರಾಯಿಸತೊಡಗಿದ

ಇಬ್ಬರಲ್ಲೂ ಮೌನ
ಮಾತಿಲ್ಲ, ಕಥೆಯಿಲ್ಲ
ಮುಂದೇನಾಗಬಹುದೆಂದೂ
ಎದುರು ನೋಡುತ್ತಿದ್ದೆ. ......

ಛೇ.. ಬಸ್ ಆಗಲೇ ಸ್ಟಾಂಡ್ ಗೆ ಬಂದು ಬಿಟ್ಟಿತ್ತು
ನಾನು ಕೆಳಗೆ ಇಳಿಯಬೇಕಾಯ್ತು
ನನ್ನ ದಾರಿ ಹಿಡಿದು ನಾನು ಸಾಗಿದೆ
ಮನಸ್ಸು ಮಾತ್ರ ಕೊರಗುತ್ತಿತ್ತು..
ಅಲ್ಲೇನಾಗಿರಬಹುದು.....???

             -ಸೋಮೇಶ್ ಎನ್ ಗೌಡ

Wednesday 12 December 2012

ಉತ್ತಮ ಭವಿಷ್ಯಕ್ಕಾಗಿ ಜಲ ಹೋರಾಟ


ಈ ಹೋರಾಟಕೆ ಕೈ ಜೋಡಿಸಿ ಹೋರಾಡು ಬಾ ಗೆಳೆಯ
ರೈತನ ಉಳಿವಿಗಾಗಿ ಪಣ ತೊಟ್ಟು ಬಾ ಗೆಳೆಯ

ಮುನ್ನುಗ್ಗಿ ನಡೆಯಬೇಕು ನಾವು ನೀರಾವರಿಗಾಗಿ ಇಂದೆ
ಮಳೆಯನ್ನೇ ನಂಬಿ ಬದುಕಲಾರೆವು ಇನ್ನು ಮುಂದೆ
ಕೆರೆ ಕಟ್ಟೆಗಳು ಬತ್ತಿವೆ ದನ ಕರುಗಳು ನರಳುತ್ತಿವೆ
ಬೆಳೆಯು ನಾಶವಾಗುತ್ತಿರಲು ರೈತನ ಒಡಲು ಸುಟ್ಟಿದೆ

ಕನಸೆಲ್ಲ ಕಮರಿದೆ ಕ್ರಾಂತಿ ಗೀತೆ ಮೂಡಿದೆ
ನಮ್ಮ ಉಳಿವಿಗಾಗಿ ನಾವು ಹೋರಾಡಲೇ ಬೇಕಿದೆ
ಜಲದ ಬೆಲೆಯ ತಿಳಿಯದೆ ಹಾಳು ಮಾಡಬೇಡಿರಿ
ಅನ್ನ ನೀಡೋ ರೈತನ ರಕ್ಷಣೆಗೆ ಬನ್ನಿರಿ

ಉತ್ತಮ ಭವಿಷ್ಯಕ್ಕೆ ಬೇಕು ನೀರಾವರಿ ವ್ಯವಸ್ತೆ
ಮುಂದಿನ ಪೀಳಿಗೆ ಬರದಿರಲಿ ಈ ಅವಸ್ತೆ
ಮುಂದೆ ಆಗೋ ಅನಾಹುತದ ಚಿಂತೆ ಮಾಡಬೇಕಿದೆ
ಇಂದೆ ನಾವು ಛಲವ ತೊಟ್ಟು ಫಲವ ಪಡೆಯಬೇಕಿದೆ.|

ಈ ಹೋರಾಟಕೆ ಕೈ ಜೋಡಿಸಿ ಹೋರಾಡು ಬಾ ಗೆಳೆಯ
ರೈತನ ಉಳಿವಿಗಾಗಿ ಪಣ ತೊಟ್ಟು ಬಾ ಗೆಳೆಯ...ಬಾ ಗೆಳೆಯ

                                     ಸೋಮೇಶ್  ಎನ್ ಗೌಡ

Tuesday 11 December 2012

ಒಲವಿನ ಕರೆ

ಮುಂಜಾನೆ ಹೊತ್ತಲ್ಲಿ ಮಂಜು ಕವಿದ ಹಾಗೆ
ಮುಸ್ಸಂಜೆ ಹೊತ್ತಲ್ಲಿ ಗಾಳಿ ಬೀಸುವ ಹಾಗೆ
ಮಳೆ ಹನಿಗಳು ಅಪ್ಪುವ ಹಾಗೆ,
ಮನಸ್ಸು ಮನಸ್ಸು ಸೇರಿದ ಹಾಗೆ
ಆವರಿಸು ನೀ ನನ್ನನು
ಸ್ವೀಕರಿಸು ಈ ಒಲವಿನ ಕರೆಯನು

ಕನ್ನಡಿಯಲು ನಿನ್ನನೆ ಕಂಡೆ
ನಗುತ ನಗುತ ಮೌನದಿ ನಿಂತೆ
ಮೋಡ ಚಿತ್ರಿಸಿದ ನಿನ್ನಯ ಹೆಸರ
ಕಂಡು ಬೆಚ್ಚಿ ಬೆರಗಾಗೋದೆ
ನೀ ನನ್ನ ಒಲವು ಕಣೇ, ಈ ಹೃದಯದ ಅರಸಿ ಕಣೇ
ಬಾ ಬಂದು ನನ್ನ ಸೇರಿಕೋ
ನಿನ್ನ ತೋಳಿಂದ ನನ್ನ ಅಪ್ಪಿಕೊ

ಹೃದಯದ ಮಾತನ್ನು ಅರಿಯುವ ನಿನ್ನನ್ನು
ಪ್ರೇಯಸಿ ಎನ್ನುವ ಬದಲು ದೇವಿಯೆನ್ನಲೇನು
ಪ್ರೀತಿಯ ಒಳನೋಟ ಕಂಡಿರುವ ನಿನ್ನನ್ನು
ಎದೆಯೊಳಗೆ ಗುಡಿ ಕಟ್ಟಿ ಪೂಜಿಸಲೇನು
ಈ ನನ್ನ ಒಲವಿನ ಕರೆಯನ್ನೂ ಸ್ವೀಕರಿಸಿ
ಬಂದು ಸೇರು ನನ್ನ ಮುಗ್ದ ಮನಸನ್ನು.|

                          ಸೋಮೇಶ್ ಎನ್ ಗೌಡ

Monday 10 December 2012

ಕಣ್ಣ್ ಮುಚ್ಚಿ ನಾನಿಂದು ನೆನೆಯಬೇಕು ನಿನ್ನ.


ಕಣ್ಣ್ ಮುಚ್ಚಿ ನಾನಿಂದು ನೆನೆಯಬೇಕು ನಿನ್ನ
ನಿನ್ನ ಅಂತರಾಳವ ಅರಿಯಬೇಕು
ತುಂಟಿಯಂತೆ ಆಡೋ ನಿನ್ನ ಆ ಮನದೊಳಗೆ
ನನ್ನ ಈ ಮನಸಿಟ್ಟು ಬೆರೆಯಬೇಕು

ಮುತ್ತನ್ನು ಇಡಬೇಕು ನಿನ್ನ ಆ ಗಲ್ಲಕ್ಕೆ
ಜೇನಿನಂತೆ  ನಿನ್ನ ತುಟಿಯನ್ನು ಸವಿದು
ಪ್ರತಿಯೊಂದು ಕ್ಷಣದಲ್ಲೂ  ನೀ ನನ್ನ ಜೊತೆಯಲ್ಲಿ
ಇರಬೇಕು ಹೀಗೆ ನನ್ನೊಲವ ಅರಿತು

ಈ ಪುಟ್ಟ ಬದುಕಿನಲಿ ಒಲವೊಂದೇ ನಮಗಿರಲಿ
ನಗು ನಗುತ ಬಾಳೋಣ ನಾವೆಂದು ಹೀಗೆ
ನಿನ್ನಾಸೆ ನನ್ನಾಸೆ ಎರಡನ್ನೂ ಸೇರಿಸಿ
ಸಾಗೋಣ ನಮ್ಮ ದೋಣಿ ಮುಳುಗದ ಹಾಗೆ.


                  ಸೋಮೇಶ್ ಎನ್ ಗೌಡ

Tuesday 27 November 2012

ಚೆಲುವೆ


ನಿನ್ನ ಮೌನ ಕಾಡುವುದೆನ್ನ
ನುಡಿ ಮಾತನು ನನ್ನ ಕೋಗಿಲೆ
ನಿನ್ನ ಧ್ಯಾನ ಮಾಡುವಾಸೆ
ನನ್ನ ಭಕ್ತನ ಮಾಡಿಕೊ ಈಗಲೆ

ಕಪ್ಪು ಚುಕ್ಕೆ ಇರಲು
ನಿನ್ನ ಮುದ್ದು ಮುಖದ ಮೇಲೆ
ಹೆಚ್ಚುತಿಹುದು ದಿನೇ ದಿನೇ
ನಿನ್ನ ಸೌಂದರ್ಯದ ಕಳೆ

ಬೆಳ್ಳಿ ಅರಮನೆಯಲ್ಲಿ ಹುಟ್ಟಿ
ಬೆಳೆದ ಬಳ್ಳಿ ನೀನು ಚೆಲುವೆ
ಬಳುಕುವೆ ನನ್ನ ಸೆಳೆಯುವೆ
ಹೃದಯವ ಕದ್ದು ಹೀಗೇಕೆ ಕಾಡುವೆ

ಅದೆಷ್ಟು ಅಂತ ಹೊಗಳಲಿ, ನಾ ನಿನ್ನ ಚೆಲುವ
ಎಷ್ಟೇ ಹೇಳಿದರು ಮರೆಯಲಾಗದು,ನಾ ನಿನ್ನ ಒಲವ

                     -ಸೋಮೇಶ್ ಎನ್ ಗೌಡ

Tuesday 20 November 2012

ರೈತನ ಕೂಗು

ಮೋಡ ಬಿತ್ತಿ ಮಳೆ ತರುವುದೆಲ್ಲಿ
ಹೊಲವ ಬಿತ್ತಿ ಕಳೆ ಕೀಳುವುದೆಲ್ಲಿ
ಆಸೆ ಬಿತ್ತಿ ಕನಸ ಕಾಣುವುದೆಲ್ಲಿ
ಬರಗಾಲ ಬಂದು ಬರಡಾಗೈತೆ ಬದುಕು
ಇನ್ನೆಲ್ಲಿದೆ ನಮ್ಮ ಬಾಳಲ್ಲಿ ಬೆಳಕು

ಸೂರ್ಯ ಚಂದ್ರ ಇರುವವರೆಗೂ
ದುಡಿಯಬೇಕೆಂಬ ನಮ್ಮಯ ಛಲವು
ಕುಗ್ಗೈತಿ ನೋಡು ಇಲ್ಲಿ
ಮತ್ತೆ ಬಡಿದೆಬ್ಬಿಸುವವರು ಯಾರಿಲ್ಲಿ

ಕೆರೆಯೂ ಬತ್ತಿ ಹೋಯ್ತು
ಮಮತೆ ಪ್ರೀತಿ ಮಾಯವಾಯ್ತು
ಅಳಲು ಕಣ್ನೀರೆ ಖಾಲಿಯಾಗಿರಲು
ಈ ಕಷ್ಟಗಳಿಗೆ ಕೊನೆ ಸಿಗುವುದು ಯಾವತ್ತು.

                     -ಸೋಮೇಶ್ ಎನ್ ಗೌಡ

ಪಾಳು ಮನೆ

ಪಾಳು ಮನೆಯ ಮುಂದೆ
ಒಂದು ಬೋಳು ಮರವ ಕಂಡೆ
ಆ ಬೋಳು ಮರದ ಕೆಳಗೆ ಕೂತು
ಗೋಳಾಡುತ್ತಿದ್ದ ಒಬ್ಬ ತಂದೆ

ಮುಂದೆ ದಾರಿಯಿಲ್ಲ
ನನಗೆ ಹಿಂದೆ ಗುರುವು ಇಲ್ಲ
ತುಂಡು ಬೀಡಿಯೊಂದೆ ನನ್ನ ಜೀವನದಲ್ಲೆಲ್ಲಾ

ಇದ್ದ ಒಬ್ಬ ಮಗನೂ ನನ್ನ ಮೂಲೆ ಗುಂಪು ಮಾಡಿ
ಬಿಟ್ಟು ಹೊರಟು ಹೋದ ತನ್ನ ನಲ್ಲೆಯ ಜೊತೆಗೂಡಿ

ಇಂದು ನನ್ನ ಮನೆಯು ಪಾಳು ಬಿದ್ದೈತೆ
ನಾ ನೆಟ್ಟಿದ್ದ ಮರವು ಬೋಳು ಆಗೈತೆ
ಕನಸೆಲ್ಲಾ ದೂರಾಗಿ ಉಸಿರೆಲ್ಲಾ ಬೇರಾಗಿ
ಈ ದೇಹ ಮಾತ್ರ ಗೊಳಾಡ್ತೈತೆ.|

           -ಸೋಮೇಶ್ ಎನ್ ಗೌಡ

Wednesday 7 November 2012

ಅಮ್ಮನ ಅರಮನೆಯಲ್ಲಿ ಗುಮ್ಮ

ಅಮ್ಮನ ಅರಮನೆಯಲ್ಲೊಂದು ದಿನ 
ಗುಮ್ಮನ ಕಂಡೆನು ಹೆದರುತಲಿ
ಕೂಗುತ,ಕುಣಿಯುತ ಓಡಾಡುತ್ತಿತ್ತು
ಮನೆಯೊಳಗೆಲ್ಲಾ ಹರುಷದಲಿ

ಕೂದಲು ನೆಲವನ್ನು ಮುಟ್ಟಿತ್ತು
ಉಗುರುಗಳ ಉದ್ದನೆ ಬೆಳೆಸಿತ್ತು
ನಾಲಿಗೆ ಚಾಚಿ ನಗುತ್ತಾ ನಗುತ್ತಾ
ಮನೆಯೊಳಗೆಲ್ಲಾ ನಲಿದಾಡುತ್ತಿತ್ತು

ನಾ ಹೆದರುತ ಮನೆ ಹೊರಗೆ ಓಡಿದೆನು
ಅಮ್ಮನ ಕಾಣದೆ ಅಳತೊಡಗಿದೆನು
ಬಳಿ ಬಂದಳು ಅಮ್ಮ ಓಡೋಡಿ
ಮನೆಬಿಟ್ಟು ಗುಮ್ಮ ಪರಾರಿ.|

                    -ಸೋಮೇಶ್ ಎನ್ ಗೌಡ

Sunday 4 November 2012

ಮತ್ತೇರಿಸಿದ ಸಿಹಿಮುತ್ತು.

ಕಾದ ಬಂಡೆಯಂತೆ ಮೈಯಾಯ್ತು
ಎದೆಯ ಬಡಿತ ಹೆಚ್ಚಾಯ್ತು
ಇದ್ದಕ್ಕಿದಂತೆ ತಲೆ ತಿರುಗಿತು
ಅವಳು ಕೊಟ್ಟ ಸಿಹಿಮುತ್ತಿನಿಂದ
ಹೀಗೆಲ್ಲಾ ನನಗಾಗಿತ್ತು

ಮನಸ್ಸು ಹೂವಾಯ್ತು
ಕೆನ್ನೆ ಕೆಂಪಾಯ್ತು
ಕಣ್ಣಲ್ಲಿ ಹೊಸ ಕಾಂತಿ ಮೂಡಿತ್ತು
ಅವಳು ಕೊಟ್ಟ ಸಿಹಿಮುತ್ತಿನಿಂದ
ಹೀಗೆಲ್ಲಾ ನನಗಾಗಿತ್ತು

ನನ್ನನ್ನೇ ನಾ ಮರೆತು
ಅವಳ ಹೃದಯದಲ್ಲಿ ಕೂತು
ನಿದ್ದೆ ಮಾಡಿದ ಅನುಭವವಾಯ್ತು
ಅವಳು ಕೊಟ್ಟ ಸಿಹಿಮುತ್ತಿನಿಂದ
ಹೀಗೆಲ್ಲಾ ನನಗಾಗಿತ್ತು
ಮೆಲ್ಲನೆ ಮತ್ತು ನೆತ್ತಿಗೇರಿತ್ತು!

    -ಸೋಮೇಶ್ ಎನ್ ಗೌಡ


Thursday 25 October 2012

ಮೋಸಹೋದ ರಾಜ


ಆದಿ ಕಾಲದಿಂದಲೂ ಸಮೃದ್ದವಾಗಿ ಬೆಳೆದು ಬಂದೆ
ಸಂಪ್ರೀತಿಯನ್ನು ಪಡೆಯುತ ಸಮರಗಳನ್ನು ಗೆಲ್ಲುತಾ
ಸಾರ್ವಭೌಮನಂತೆ ಮೆರೆದೆ ನಾನು ಈ ಮಣ್ಣಲಿ

ಸಕಲ ವಿದ್ಯೆಗಳನು ಕಲಿತು
ಸುಲಭ ಮಾರ್ಗದಲ್ಲೇ ನಡೆದೆ
ಜಟಿಲವಾದ ಕಾರ್ಯಗಳನ್ನು
ಕ್ಷಣದಿ ನಾನು ಮುಗಿಸಿ ನಿಂದೆ 


ವೀರನಂತೆ ಮೆರೆಯುತ್ತಿದ್ದೆ
ಸೂರೆ ಮಾಡಿದಳು ಅಪ್ಸರೆ ನನ್ನ
ನಿದ್ದೆ ಗೆಡಿಸಿ ಸದ್ದೆ ಮಾಡದಂತೆ
ಸೆಳೆದುಬಿಟ್ಟಳು ಎನ್ನ

ಪ್ರೇಮದ ಮಾಟವೋ ಅಪ್ಸರೆಯ ಆಟವೊ
ನನ್ನೆ ನಾನು ಮರೆತೆ ಅಂದು
ಪ್ರೀತಿಯೊಂದೆ ನನ್ನ ಕಣ್ಣ ಮುಂದು

ಅವಳ ಹಿಂದೆ ಬಿದ್ದೆನು
ರಾಜ್ಯವನ್ನೇ ಮರೆತನು
ಎಂದು ಸೋಲದ ಈ ವೀರನು
ಅವಳ ಮಾಟಕ್ಕೆ ಬಂದಿಯಾದೆನು

ಕುತಂತ್ರದಿಂದ ಸೋಲಿಸಿ ರಾಜ್ಯ ಕಸಿದುಕೊಂಡಳು
ಬೆನ್ನ ಹಿಂದೆ ಚೂರಿ ಹಾಕಿ ಮೋಹಕ ಮೋಸವ ಮಾಡಿದಳು
ಪ್ರೀತಿಗಾಗಿ ರಾಜ್ಯ ಮರೆತು ಎಲ್ಲ ಕಳೆದುಕೊಂಡೆನು
ಅವಳು ಕೊಟ್ಟ ಶಿಕ್ಷೆಯಿಂದ ನಾನು ಧರೆಯ ತೊರೆದೆನು.|


               -ಸೋಮೇಶ್ ಎನ್ ಗೌಡ



Tuesday 23 October 2012

ಬೇಕೇ ಬೇಕು! 'ಕವನ'

ರಾತ್ರಿ ಕನಸಲ್ಲೂ
ಸುಡುವ ಬಿಸಿಲಲ್ಲೂ
ಸುರಿವ ಮಳೆಯಲ್ಲೂ
ಕಾಡುವುದೊಂದೇ ನನ್ನ
ಅದೇ 'ಕವನ'
ಬೇಸರದಿ ಕುಂತರು
ಹಸಿವಿನಿಂದ ಬಳಲಿದರು
ಧೈರ್ಯಗೆಟ್ಟು ಹಿಂದೆ ಸರಿದರು
ಮತ್ತೆ ಬಡಿದೆಬ್ಬಿಸುವುದೆನ್ನ
ಅದೇ 'ಕವನ'

ಒಂಟಿಯಾಗಿ ನಡೆವಾಗ
ಖುಷಿಯಿಂದ ಮೆರೆವಾಗ
ಸಂಕಟದಿ ನರಳಾಡುವಾಗ
ಕೈ ಜೋಡಿಸಿ ಜೊತೆ ಸೇರುವುದೊಂದೇ ನನ್ನ
ಅದೇ 'ಕವನ'

ಮುದ ನೀಡಲು ಮನಸ್ಸಿಗೆ
ಸವಿ ನುಡಿಯಲು ಬಾಯಿಗೆ
ಪ್ರತಿಯೊಬ್ಬರ ಬಾಳಿಗೆ
ಬೇಕೇ ಬೇಕು!!
ಸುಂದರ 'ಕವನ' .

  -ಸೋಮೇಶ್ ಎನ್ ಗೌಡ

ಮುದ್ದು ಹುಡುಗಿಯ ಕರೆ


ಮುದ್ದಾದ ಹುಡುಗಿಯ ಹೃದಯ
ಖುದ್ದಾಗಿ ಕರೆದಿದೆ ನನ್ನಯ
ಸಿಹಿ ನೀಡಲೋ! ಸಹಿ ಮಾಡಲೋ!
ಸಂಬಂಧ ಬೆಸೆಯುವ ಬಯಕೆಯೋ...


ಆರರ ಹೊತ್ತಿಗೆ ಅರಸನಂತೆ ಬಾ
ಜೊತೆಯಲಿ ಒಂದು ಗುಲಾಬಿ ತಾ
ಹೀಗೆಲ್ಲಾ ಆಜ್ಞೆ ಮಾಡಿ ಕರೆದಿಹಳು ನನ್ನ
ಏಕೆಂಬುದೇ ತಿಳಿದಿಲ್ಲ ನನಗಿನ್ನ.....?


ಸೆಳೆದಿಹಳು ನನ್ನ ಅಯಸ್ಕಾಂತವು
ಕಬ್ಬಿಣವ ಸೆಳೆದಂತೆ
ಮುತ್ತಿಗೆ ಹಾಕಿ ಮುತ್ತನು ನೀಡವ
ಚೊಚ್ಚಲ ಬಯಕೆಯೂ ಅವಳಿಗಿದೆಯಂತೆ
ಎತ್ತಲು ಹೋಗಲಾಗದೆ ಸುತ್ತಲು ನೋಡಲು

ಅವಳದೇ ರೂಪವು ಕಾಡುವುದಂತೆ
ಏನಾಗುವುದೇನೋ,ಅರಿಯೆನು ನಾನು?
ಕಾದುನೋಡಬೇಕಷ್ಟೇ ಎಲ್ಲರಂತೆ...!!!

  -ಸೋಮೇಶ್ ಎನ್ ಗೌಡ