Tuesday 22 January 2013

ಪಾಪಿ ಮನಸ್ಸು


ನೂರೊಂದು ನೆನಪುಗಳ
ಒಟ್ಟಾಗಿ ಕರೆತಂದು
ನೂರೆಂಟು ಭಾವಗಳ
ಜೊತೆಯಲ್ಲಿ ಪೋಣಿಸಿ
ನೂರಾಸೆ ಎದೆಯಲ್ಲಿ
ಮೂಡುವಂತೆ ಮಾಡಿ
ನುಗ್ಗುವುದು ಕುಗ್ಗುವುದು
ಎಲ್ಲೆಂದರಲ್ಲಿ
ಬೇಲಿಯೇ ಇರದ
ಈ ಪಾಪಿ ಮನಸ್ಸು

ಕನಸನ್ನ ಹೆಣೆಯುವುದು
ನನಸಾಗದೆ ಕೊರಗುವುದು
ಒಮ್ಮೊಮ್ಮೆ ಎಲ್ಲಾ ಮರೆತು
ಸುಖವಾಗಿ ಮಲಗುವುದು
ಹಾಡುವುದು,ಕುಣಿಯುವುದು
ಒಳಗೊಳಗೆ ಅಳುವುದು
ಯಾರಿಗೂ ಕಾಣದ
ಈ ಪಾಪಿ ಮನಸ್ಸು

ಕೆಟ್ಟದ್ದು ಮಾಡಿ
ಸುಳ್ಳನ್ನು ಹೇಳಿ
ಬದುಕಲು ಆಗಾಗ
ಸ್ವಾರ್ಥಿಯು ಆಗುವುದು
ನೂರು ತರ ಯೋಚಿಸಿ
ಮೂರೇ ತರ ಬದುಕುವುದು
ಎಲ್ಲವನ್ನು ಬಯಸುವ
ಈ ಪಾಪಿ ಮನಸ್ಸು

           ಸೋಮೇಶ್ ಎನ್ ಗೌಡ