Thursday 2 August 2018

ಊರ ದಾರಿ ಎಲ್ಲಿದೆ?


ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ
ಊರ ದಾರಿ ಎಲ್ಲಿದೆ …. ಮರೆತೇ ಹೋಗಿದೆ....!
  
ಡಾಲರ್ ಹುಡುಕಿಕೊಂಡು ಹೊರ ದೇಶವ ಸುತ್ತಿದೆ
ದಾರಿ ತಿಳಿಯದಿದ್ದರೂ ಜಾಣನಂತೆ ನುಗ್ಗಿದೆ
ತನ್ನತನವ ತಳ್ಳಿದೆ ಪಾಶ್ಚಾತ್ಯವ ತಬ್ಬಿದೆ
ಭಾಷೆ ಬಿಟ್ಟು ದೇಶ ಬಿಟ್ಟು ತಬ್ಬಲಿಯಂತೆ ಬದುಕಿದೆ

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)

ಗಿಲ್ಲಿ ದಾಂಡು ಕುಂಟೆ ಬಿಲ್ಲೆ
ಗೋಲಿ ಬುಗುರಿ ಚೌಕಾಬಾರ
ಎಲ್ಲವನ್ನೂ ಆಡಿದ್ದು ಅಲ್ಲೇ ನಮ್ಮೂರಿನಲ್ಲೇ
ಮುದ್ದೆ ಸಾರು ರೊಟ್ಟಿ ಚಟ್ನಿ
ಹಬ್ಬದಲ್ಲಿ ಪಾಯಸ, ಹೋಳಿಗೆ
ಎಲ್ಲವನ್ನೂ ಚಪ್ಪರಿಸಿದ್ದು ಅಲ್ಲೇ ನಮ್ಮೂರಿನಲ್ಲೇ

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)

ಅವ್ವನ ಮಡಿಲು ಅಪ್ಪನ ಹೆಗಲು
ಅಕ್ಕ ತಮ್ಮನ ಚೇಷ್ಟೆ ಗಮಲು
ಮತ್ತೆ ಸಿಗುವುದೇ ನನಗೆ ಅಲ್ಲೇ ಜನ್ಮದಲ್ಲೇ       
ಮೇಷ್ಟ್ರು ಹೇಳಿಕೊಟ್ಟ ಸಣ್ಣಿ ಮದುವೆ ಗೋವಿನ ಹಾಡು
ಊರ ಜನರು ನಟಿಸಿದ್ದ ಶ್ರೀ ಕೃಷ್ಣ ಸಂಧಾನ
ಮತ್ತೆ ಕೇಳಿ ನೋಡಬೇಕು  ಅನಿಸಿದೆ ಅಲ್ಲೇ ನಮ್ಮೂರಿನಲ್ಲೇ

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)

ಬಂಗಲೆ ಕಾರು ಆಳು ಕಾಳು ಎಲ್ಲವೂ ನನಗೆ ಉಂಟು
ಇಲ್ಲ ಪ್ರೀತಿ ಹಂಚಲು ನಮ್ಮೂರ ಜನರ ನಂಟು
ನೂರು ಭಾಷೆ ಆರು ವಿದ್ಯೆ ಕಲಿತರು ಇಲ್ಲ ಸುಖವು
ಭಾವನೆಗಳ ಬೆಸೆಯುವ ನಮ್ಮೂರೇ ಸ್ವರ್ಗವು

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)



Sunday 1 July 2018

ಒಲವಿಗಿದೆ ಇಲ್ಲಿ ಅಭಾವ!

ಉಣಬಡಿಸು ತಂದೆ ಒಲವನ್ನೊಂದೆ
ಒಲವಿಗಿದೆ ಇಲ್ಲಿ ಅಭಾವ!

ಮಕ್ಕಳಿಗಿಲ್ಲ ಇಂದು ತಂದೆ-ತಾಯಿಯಲಿ ಪ್ರೀತಿ
ಗಂಡ ಹೆಂಡಿರ ನಡುವೆ ವಿರಹದ್ದೇ ಭೀತಿ
ಸ್ನೇಹದಲಿ ಸಂಘರ್ಷ -ಪ್ರೇಮದಲ್ಲೂ ಮೋಸ
ಎಲ್ಲಿ ಹೋದರೆ ಅಲ್ಲಿ ಸ್ವಾರ್ಥದ್ದೆ ನಿವಾಸ!

ಉಣಬಡಿಸು ತಂದೆ ಒಲವನ್ನೊಂದೆ
ಒಲವಿಗಿದೆ ಇಲ್ಲಿ ಅಭಾವ!

ಮುಳುಗಿಹರೆಲ್ಲರು ಹಣದ ಅಮಲಿನಲ್ಲಿ
ಅರಮನೆಯೇ ಬೇಕೆಂಬ ಆಸೆ ಯಾರಿಗಿಲ್ಲ ಇಲ್ಲಿ?
ಕನಸನ್ನು ಕೊಳ್ಳುವರು ವಯಸ್ಸನ್ನು ತಳ್ಳುವರು
ಮನಸು ಕುಣಿಸಿದ ಹಾಗೆ ಹುಚ್ಚೆದ್ದು ಕುಣಿಯುವರು

ಉಣಬಡಿಸು ತಂದೆ ಒಲವನ್ನೊಂದೆ
ಒಲವಿಗಿದೆ ಇಲ್ಲಿ ಅಭಾವ!

ತನ್ನನ್ನೆ ತಾ ಮರೆತು ಬೇರೊಬ್ಬರ ಜೊತೆ ಬೆರೆತು
ಸ್ವಾಭಿಮಾನವನು ಮಾರಿದವರೆಷ್ಟೋ?
ಪ್ರತಿಷ್ಟೆಗೆ ಹಸಿದು ನಿಷ್ಠೆಯನು ತೊರೆದು
ಎಲ್ಲ ಗೆದ್ದವರಂತೆ ಮೆರೆದವರೆಷ್ಟೋ?

ಉಣಬಡಿಸು ತಂದೆ ಒಲವನ್ನೊಂದೆ
ಒಲವಿಗಿದೆ ಇಲ್ಲಿ ಅಭಾವ

Sunday 18 February 2018

ಸುಳ್ಳೇ ಸುಖದ ತಿರುಳು

ನಿದ್ದೆ ಬಂದ ಹಾಗೆ ಮಲಗಬೇಕು ಈಗ
ಮುದ್ದಾಡಲಿ ಅವಳು
ಪೆದ್ದನ ಹಾಗೆ ಇರಬೇಕು ಆಗಾಗ
ಸುಳ್ಳೇ ಸುಖದ ತಿರುಳು
ಕಂಡರೂನು ಕಾಣದಾಗೆ
ನೊಂದರೂನೂ ನೋಯದಾಗೆ
ಅನಿಸದಿದ್ದರೂ ಏನೋ ಅನಿಸಿದ ಹಾಗೆ
ನಟಿಸಬೇಕು ಈಗ
ಆವರಿಸಲಿ ಅವಳು ಬೇಗ!

ಚಂದ್ರನುರಿದು ಬೂದಿಯಾಗಿ
ರವಿಯು ಅತ್ತು ಕಡಲನು ತಾಗಿ
ಹಸಿರು ತನ್ನುಸಿರ ಬಿಗಿಯಲಿ ಹಿಡಿದು
ಮರವು ಮುನಿದು ತನ್ನನೆ ಕಡಿದು
ಅವಳ ಮುದ್ದನು ನೋಡುತ ಮರುಗಿ
ಹೂವು ಅರಳದೆ ಮೊಗ್ಗಲೆ ಕೊರಗಿ
ಗೆಲ್ಲಬೇಕು ನಾನು!
ಅವಳ ಮುತ್ತಿನ ಮತ್ತಿಗೆ ಸೋತು!!

ನಿದ್ದೆ ಬಂದ ಹಾಗೆ ಮಲಗಬೇಕು ಈಗ
ಮುದ್ದಾಡಲಿ ಅವಳು
ಪೆದ್ದನ ಹಾಗೆ ಇರಬೇಕು ಆಗಾಗ
ಸುಳ್ಳೇ ಸುಖದ ತಿರುಳು! :)