Thursday 2 August 2018

ಊರ ದಾರಿ ಎಲ್ಲಿದೆ?


ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ
ಊರ ದಾರಿ ಎಲ್ಲಿದೆ …. ಮರೆತೇ ಹೋಗಿದೆ....!
  
ಡಾಲರ್ ಹುಡುಕಿಕೊಂಡು ಹೊರ ದೇಶವ ಸುತ್ತಿದೆ
ದಾರಿ ತಿಳಿಯದಿದ್ದರೂ ಜಾಣನಂತೆ ನುಗ್ಗಿದೆ
ತನ್ನತನವ ತಳ್ಳಿದೆ ಪಾಶ್ಚಾತ್ಯವ ತಬ್ಬಿದೆ
ಭಾಷೆ ಬಿಟ್ಟು ದೇಶ ಬಿಟ್ಟು ತಬ್ಬಲಿಯಂತೆ ಬದುಕಿದೆ

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)

ಗಿಲ್ಲಿ ದಾಂಡು ಕುಂಟೆ ಬಿಲ್ಲೆ
ಗೋಲಿ ಬುಗುರಿ ಚೌಕಾಬಾರ
ಎಲ್ಲವನ್ನೂ ಆಡಿದ್ದು ಅಲ್ಲೇ ನಮ್ಮೂರಿನಲ್ಲೇ
ಮುದ್ದೆ ಸಾರು ರೊಟ್ಟಿ ಚಟ್ನಿ
ಹಬ್ಬದಲ್ಲಿ ಪಾಯಸ, ಹೋಳಿಗೆ
ಎಲ್ಲವನ್ನೂ ಚಪ್ಪರಿಸಿದ್ದು ಅಲ್ಲೇ ನಮ್ಮೂರಿನಲ್ಲೇ

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)

ಅವ್ವನ ಮಡಿಲು ಅಪ್ಪನ ಹೆಗಲು
ಅಕ್ಕ ತಮ್ಮನ ಚೇಷ್ಟೆ ಗಮಲು
ಮತ್ತೆ ಸಿಗುವುದೇ ನನಗೆ ಅಲ್ಲೇ ಜನ್ಮದಲ್ಲೇ       
ಮೇಷ್ಟ್ರು ಹೇಳಿಕೊಟ್ಟ ಸಣ್ಣಿ ಮದುವೆ ಗೋವಿನ ಹಾಡು
ಊರ ಜನರು ನಟಿಸಿದ್ದ ಶ್ರೀ ಕೃಷ್ಣ ಸಂಧಾನ
ಮತ್ತೆ ಕೇಳಿ ನೋಡಬೇಕು  ಅನಿಸಿದೆ ಅಲ್ಲೇ ನಮ್ಮೂರಿನಲ್ಲೇ

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)

ಬಂಗಲೆ ಕಾರು ಆಳು ಕಾಳು ಎಲ್ಲವೂ ನನಗೆ ಉಂಟು
ಇಲ್ಲ ಪ್ರೀತಿ ಹಂಚಲು ನಮ್ಮೂರ ಜನರ ನಂಟು
ನೂರು ಭಾಷೆ ಆರು ವಿದ್ಯೆ ಕಲಿತರು ಇಲ್ಲ ಸುಖವು
ಭಾವನೆಗಳ ಬೆಸೆಯುವ ನಮ್ಮೂರೇ ಸ್ವರ್ಗವು

ಊರ ದಾರಿ ಎಲ್ಲಿದೆ ಮರೆತೆ ಹೋಗಿದೆ
ಬಂದು ನಗರ ಸೇರಿಕೊಂಡು ಎಲ್ಲ ಮರೆತಿದೆ. (2)