Monday 30 January 2017

ಜೀವನ ಜಂಜಾಟ!

ಕನಸುಗಳೇ ಕಾಲೆಳೆಯುವಾಗ
ಕವಿತೆಗಳ ಜನನ
ಕಾಗುಣಿತ ಬರೆದು ನಿಂತಾಗ
ಕಥೆಯಾಯ್ತು ಜೀವನ
ಒಲವಲ್ಲಿ ಮಿಂದು ಎದ್ದಾಗ
ಶುರುವಾಯ್ತು ಶ್ರಾವಣ
ಒಡನಾಟ ಗಟ್ಟಿಗೊಂಡಾಗ
ಪ್ರತಿ ಕ್ಷಣವು ಔತಣ

ರಾಗ ತಾಳ ಸೇರಿ
ಇಂಪಾದ ಗಾಯನ
ರಾತ್ರಿ ಹಗಲು ಜಾರಿ
ಕಳೆಯುವುದು ಪ್ರತಿದಿನ
ನವಿಲಿನ ನರ್ತನ
ಪ್ರಕೃತಿಗೆ ಭೂಷಣ
ನಗುವೆಂಬ ಸಾಧನ
ಗೆಲುವಿಗೆ ಪ್ರೇರಣ!

ರಮಿಸುವ ರಂಭೆ ಕಂಡರೆ
ಕೆರಳುವುದು ಕಾ-ಮನ
ಮನಸ್ಸಿಗೆ ರೆಕ್ಕೆ ಬಂದರೆ
ಕೈಗೆ ಸಿಗುವುದೇ ಗಗನ

ಮೂಡಣ- ಪಡುವಣ?
ಸಂಶಯದ ಪಯಣ
ಸಂಕಲನ -ವ್ಯವಕಲನ
ಕಲಿಯದಿದ್ದರೆ ಪತನ!
ಸತ್ತರೆ ಮರಣ
ಹುಟ್ಟಿದರೆ ಜನನ
ನಡುವಿನ ಜಂಜಾಟವೇ
ಈ ಜೀವನ! #SNG

-ಸೋಮೇಶ್ ನಿಂಗೇಗೌಡ

No comments:

Post a Comment