Sunday, 27 August 2017

ರೂಪಸಿ ನಿನ್ನಯ ರೂಪವೆ ಚೆಂದ

ರೂಪಸಿ ನಿನ್ನಯ ರೂಪವೆ ಚೆಂದ
ರಮಿಸಿದೆ ನಿನ್ನ್  ಅಂದ
ಮನಸ್ಸಿಗಂಟಿದೆ ನಿನ್ನ ಮೈ ಗಂಧ
ಬಯಸಿದೆ ಬಿಗಿ ಬಂಧ!
ತೂಕಡಿಸಿ ಮಲಗಿ ನಿನ್ನ ಮಡಿಲಲಿ
ಆಗಬೇಕು ನಾ ಕಂದ
ಕೆರಳಿಸಿ ಕಾಡಿಸಿ ಮನದ ಮರೆಯಲಿ
ನಗುವುದೇ ಬಲು ಚೆಂದ
                            
ರೂಪಸಿ ನಿನ್ನಯ ರೂಪವೆ ಚೆಂದ
ರಮಿಸಿದೆ ನಿನ್ನ ಅಂದ
ತಣ್ಣನೆ ಗಾಳಿಗೂ ನಿನ್ನಯ ನೆರಳಿಗೂ
ಇಲ್ಲ ಯಾವುದೇ ಭೇದ
ಹೆಜ್ಜೆಯ ಇಟ್ಟರೆ ಗೆಜ್ಜೆಯ ತಾಳಕೆ
ಹೊಮ್ಮುವುದು ಸ್ವರ-ನಾದ
ನೆನೆಯುತ ನಿನ್ನನು ಗೀಚುತ ಪದವನು
ಮೈಮರೆಯುವುದೇ ಆನಂದ!

ರೂಪಸಿ ನಿನ್ನಯ ರೂಪವೆ ಚೆಂದ
ರಮಿಸಿದೆ ನಿನ್ನ್  ಅಂದ

Sunday, 2 April 2017

ಅವಳು ಕುಸುಮವು

ಹಳದಿ ಬಣ್ಣದಿ
ಮೆರೆದ ಚಂದಿರೆ
ಮಿನುಗುತ್ತಿದ್ದಳು ಚೆಂದದಿ
ನಗುತಾ ಮೆಲ್ಲನೆ
ಸೆಳೆದು ನನ್ನನೆ
ಮೋಡಿ ಮಾಡಿದಳು ಅಂದದಿ
ಕಣ್ಣು ಕಮಲವು
ಬಣ್ಣ ಕುಮುದವು
ಮೊಗವು ಅರಳಿದ ಮಲ್ಲಿಗೆ
ಗಿಣಿಯ ನಾಸಿಕ
ನಡುಗೆ ಮೋಹಕ
ನೋಡಿ ನಾಚಿತು ಸಂಪಿಗೆ
ಅವಳು ಕುಸುಮವು
ಹಂಸ ನಾದವು
ಸೂಸುತ್ತಿರಲಿ ಕಂಪನು
ದಿನವು ಸೆಳೆಯುತ
ಒಲವ ಎರೆಯುತ
ನೀಡಲಿ ಮನಕೆ ತಂಪನು!

Monday, 30 January 2017

ಜೀವನ ಜಂಜಾಟ!

ಕನಸುಗಳೇ ಕಾಲೆಳೆಯುವಾಗ
ಕವಿತೆಗಳ ಜನನ
ಕಾಗುಣಿತ ಬರೆದು ನಿಂತಾಗ
ಕಥೆಯಾಯ್ತು ಜೀವನ
ಒಲವಲ್ಲಿ ಮಿಂದು ಎದ್ದಾಗ
ಶುರುವಾಯ್ತು ಶ್ರಾವಣ
ಒಡನಾಟ ಗಟ್ಟಿಗೊಂಡಾಗ
ಪ್ರತಿ ಕ್ಷಣವು ಔತಣ

ರಾಗ ತಾಳ ಸೇರಿ
ಇಂಪಾದ ಗಾಯನ
ರಾತ್ರಿ ಹಗಲು ಜಾರಿ
ಕಳೆಯುವುದು ಪ್ರತಿದಿನ
ನವಿಲಿನ ನರ್ತನ
ಪ್ರಕೃತಿಗೆ ಭೂಷಣ
ನಗುವೆಂಬ ಸಾಧನ
ಗೆಲುವಿಗೆ ಪ್ರೇರಣ!

ರಮಿಸುವ ರಂಭೆ ಕಂಡರೆ
ಕೆರಳುವುದು ಕಾ-ಮನ
ಮನಸ್ಸಿಗೆ ರೆಕ್ಕೆ ಬಂದರೆ
ಕೈಗೆ ಸಿಗುವುದೇ ಗಗನ

ಮೂಡಣ- ಪಡುವಣ?
ಸಂಶಯದ ಪಯಣ
ಸಂಕಲನ -ವ್ಯವಕಲನ
ಕಲಿಯದಿದ್ದರೆ ಪತನ!
ಸತ್ತರೆ ಮರಣ
ಹುಟ್ಟಿದರೆ ಜನನ
ನಡುವಿನ ಜಂಜಾಟವೇ
ಈ ಜೀವನ! #SNG

-ಸೋಮೇಶ್ ನಿಂಗೇಗೌಡ

Tuesday, 3 January 2017

ನಗುವೇ ಜೀವನದ ಗುಟ್ಟು (ಹೊಸ ವರ್ಷಕ್ಕೆ ಹೊಸ ಕವನ)

ಎಲ್ಲಾ ಮರೆತು
ನಗುತಿರು ಮನವೇ
ನಗುವೇ ಜೀವನದ ಗುಟ್ಟು
ನೆಮ್ಮದಿ ಕಲಿತು
ಬಾಳು ಸುಖದಿ
ನಿನ್ನೊಳಗಿನ ಆಸೆಯ ಬಿಟ್ಟು
ಎಲ್ಲಾ ಕ್ಷಣಿಕ!
ಇಲ್ಯಾರು ಪ್ರಾಮಾಣಿಕ?
ನಲಿವಿಗೆ ನೊಗವನು ಕಟ್ಟು
ನಿನ್ನಲಿ ನೀನು
ಬದುಕಿದರೆ ಸಿಹಿ ಜೇನು
ಬೆಳೆಸು ಕನಸಿನ ಗಿಡ ನೆಟ್ಟು
ಗುರಿಯನು ಹಿಡಿದು
ಗುರು ಹಿರಿಯರ ನೆನೆದು
ಗೆಲುವಿನ ಬಾಗಿಲು ತಟ್ಟು
ಒಲವಿನ ದೋಣಿಲಿ
ಚಲಿಸುವ ನಿನಗೆ
ಪ್ರತಿದಿನವೂ ಹೊಸ ಹುಟ್ಟು!!
ಎಲ್ಲಾ ಮರೆತು ನಗುತಿರು ಮನವೇ

ನಗುವೇ ಜೀವನದ ಗುಟ್ಟು!.