Monday, 1 July 2013

ಎಲ್ಲಿರುವೆ ನನ್ನ ಪಾರಿಜಾತ ?

ಕಣ್ಣ ಮುಚ್ಚಿ ಧ್ಯಾನ ಮಾಡಿ ನಿನ್ನ ಪಡೆಯಲು ಸಮಯವಿಲ್ಲ
ದಿವ್ಯದೃಷ್ಟಿಯಿಂದ ಹುಡುಕಿ ಗೆಲ್ಲಲ್ಲು, ನಾ ದೇವನಲ್ಲ
ಕಣ್ಣ ಮುಚ್ಚಾಲೆ ಸಾಕು ನಿಲ್ಲಿಸು, ನೀನಿನ್ನೂ ಚಿಕ್ಕವಳಲ್ಲ
ಒಲವ ಧಾರೆ ಎರೆವ ನಿನಗೆ ನಾ ಹೆಚ್ಚೇನು ಹೇಳಬೇಕಿಲ್ಲ 

ಎಲ್ಲಿ ಅಡಗಿರುವೆ ನನ್ನ ಹೃದಯ ಕದ್ದು
ಎದುರು ಬಂದು ಮಾಡಬಾರದೆ ನನ್ನ ಪೆದ್ದು!

ಹಗಲಿರುಳೂ  ನಿಲ್ಲದ ಅಲೆದಾಟ
ನಿನ್ನ ಹುಡುಕುವ ಈ ಅಲೆಮಾರಿ ಪರದಾಟ
ಸಾಕು ಸಾಕು ನಿಲ್ಲಿಸು ನಿನ್ನ ಈ ಆಟ
ಹೃದಯ ಕೊಟ್ಟು ಮನವ ಗೆಲ್ಲೇ, ನನ್ನ ಪಾರಿಜಾತ

ಅಲೆದಲೆದು
ಮನವೂ ಕುರುಡಾಗುವ ಮೊದಲು
ನೀ ಬಂದು ನನ್ನ ಸೇರು
ನಿನ್ನ ಹಳೆಯದನ್ನೆಲ್ಲಾ ಮಾರು
ಶುರುವಾಗಲಿ ನಮ್ಮ ಪ್ರೀತಿ ಕಾರುಬಾರು!

-ಸೋಮೇಶ್ ಎನ್ ಗೌಡ

Monday, 17 June 2013

ಬಹಳ ದಿನಗಳ ಹಿಂದೆ

ಬಹಳ ದಿನಗಳ ಹಿಂದೆ
ಬಾರಿಗೋಗಿದ್ದೆ ನಾ
ಬ್ರಾಂದಿ ಕುಡಿಯಲು ಅಲ್ಲ
ಬಿಲ್ ಪೇ ಮಾಡಲೂ ಅಲ್ಲ!
ಕುಡಿದು ಕುಡಿದು ಬಳಲಿ ಬಿದ್ದಿದ್ದ
ಗೆಳೆಯನ ಹೊತ್ತು ತರಲು!
ಅವನ ಮನೆಗೆ ಕೊಂಡೊಯ್ಯಲು

ಸಂಸಾರದಿಂದ ಬೇಸರಗೊಂಡು
ಸಂಗಾತಿಯೊಡನೆ ಮುನಿಸಿಕೊಂಡು
ಎಲ್ಲಾನು ಮರೆತುಬಿಡಲೆಂದು
ಮನಸ್ಸನ್ನು ಹರಿದು ಬಿಟ್ಟು
ಸಾಕು ಸಾಕೆನಿಸುವಷ್ಟು ಕುಡಿದು
ಜ್ಞಾನವಿಲ್ಲದೆ ಮಲಗಿದ್ದ ತಣ್ಣನೆ, ಬಾರಲ್ಲಿ!

ಮೈಗಂಟಿತ್ತು ಬಾರ್ ಗಂಧ
ಕೆಟ್ಟು ಹೋಗಿತ್ತು ಮನದ ಅಂದ
ತಬ್ಬಿ ಎಳೆದೊಯ್ಯುವಾಗವನ
ನನ್ನ ಮನ ಕೇಳಿತು ಪ್ರಶ್ನೆ
ಲೈಫು ಇಷ್ಟೇನಾ ?
'
'
ವೈಪು ಹೀಗೂ ನಾ

-ಸೋಮೇಶ್ ಎನ್ ಗೌಡ

ಎಲ್ಲಿ ಹೋಗಿದೆಯೋ ಮನ

ಎಲ್ಲಿ ಹೋಗಿದೆಯೋ ಮನ
ಎಲ್ಲಿ ಹೋಗಿದೆಯೋ ಮನ
ಕಾಣಿಸದೆ ಕಾಡುತಿದೆ ನನ್ನ
ಜಲ್ಲಿ ಕಲ್ಲುಗಳ ನಡುವೆ
ಹಳ್ಳ ಕೊಳ್ಳಗಳ ದಾಟಿ
ಹುಡುಕಿದೆ, ಸಿಗಲಿಲ್ಲ ಎಲ್ಲೂss
ಎಲ್ಲಿ ಹೋಗಿದೆಯೋ ಮನ
ಎಲ್ಲಿ ಹೋಗಿದೆಯೋ
ಕಳ್ಳ ಕಾಕರ ಕೈಗೆ
ಸಿಕ್ಕಿ ಬಿದ್ದಿದೆಯೋ?
ಎಲ್ಲಾ ಮರೆತು
ಕಲ್ಲಾಗಿ ಹೋಗಿದೆಯೋ?
ಮನ ಎಲ್ಲಿ ಹೋಗಿದೆಯೋ
ಅರಿಯೆನು ನಾ
ಇದರಾಟವನು
ಬಲ್ಲಿರೇನು ನೀವು ?
ಎಲ್ಲಿ ಹೋಗಿದೆಯೋ
ಮನ
ಎಲ್ಲಿ ಹೋಗಿದೆಯೋ!


-ಸೋಮೇಶ್ ಎನ್ ಗೌಡ

ತಲೆ ಕೆಟ್ಟ ಬಸವ


ತಲೆ ಕೆಟ್ಟ ಬಸವ
----------------

ತಲೆ ಕೆಟ್ಟ ಬಸವ
ಓಡೋಡಿ ಬಂದ
ಬಡ ಬಡಾಯಿಸಿಕೊಂಡು
ಬಳುಕ್ ತ್ತಿದ್ದ ಬಳ್ಳಿ
ಎಲ್ಲಾರ್ನು ತಳ್ಳಿ
ಮುಂದ್ಬಂದ್ಲು ಬಸವನ್ ಕಂಡು

ಒಳಗಿತ್ತು ದೇವ್ರು
ಮೊಳಗಿತ್ತು ಬಾರು
ತುಂಬಿತ್ತು ಊರಿಗ್ ಊರೇ
ನೆರೆದಿದ್ದ ಜನರ
ನಡುಮದ್ಯೊಬ್ಬ ಕುವರ
ಬೆಳ್ಳಿ ಅವನ ತಾರೆ

ಹುಡ್ಕೊಂಡು ಗಂಡ್ನ
ಓಡ್ಬಂದ್ಲು ನಂಜಿ
ಬಾರೊಳಗೆ ಅಂಜಿ ಅಂಜಿ
ಇವ್ರ ಪೋಲಿ ಪದ್ಯ
ಈ ಜನರ ಮದ್ಯ
ಉರಿದ ಉಪ್ಪಾಗಿದ್ಲು ನಂಜಿ
ಸಿಕ್ಕ್ ಬಿದ್ರೆ ಬಸವ ಬಜ್ಜಿ .

ಸಿಕ್ಕ್ ಬಿದ್ರೆ ಬಸವ ಬಜ್ಜಿ .

-ಸೋಮೇಶ್ ಎನ್ ಗೌಡ

Tuesday, 21 May 2013

ಎಲ್ಲಾ ಬೇಕೇ ನಿನಗೆ?

ನಿನ್ನ ಜೋಳಿಗೆ ತುಂಬಾ ತುಂಬಿದೆ ಚಿನ್ನದ ಒಡವೆ
ಹೊಟ್ಟೆ ಬಿರಿದರೂ ನಿನಗೆ ಇನ್ನೂ ನೀಗದ ಹಸಿವೆ?
ಹೊತ್ತು ಮೀರುವ ಮುನ್ನ ಹೊತ್ತು ತರುವೆ ದಿನವೂ
ಸತ್ತ ಮೇಲೂ ನಿನ್ನ ಹುಡುಕಿ ಬರುವುದೇ ಈ ಸುಖವೂ

ಅತ್ತ ಕಟ್ಟುವರಿಲ್ಲ, ಇತ್ತ ಕಡಿಯುವರಿಲ್ಲ
ಎತ್ತ ಸೇರಿಸಲೆಂದು ನಿನ್ನಯ ಈ ಚಿತ್ತ
ಊರೇ ಪಡೆಯುವ ಆಸೆ, ನಾಡೆ ಮಾರುವ ಆಸೆ
ಯಾವ ಕೇಡಿಗೆ ನಿನ್ನ ಈ ಪರಿಯ ಮೋಹ

ದಾಹ ನೀಗಿಸಲೆಂದು ಕೊಡವೇ ಬರಿದು ಮಾಡಿದರೆ
ದಣಿವೇ ಆಗದೆ ಮತ್ತೆ, ಆಸೆ ನಿನ್ನಯ ಸ್ವತ್ತೆ?
ಉಸಿರೂ ನಿಲ್ಲುವವರೆಗೂ ಕೆಸರೇ ಬಳಿಯುವೆಯೇನು
ಯೋಗ್ಯ ಹೆಸರ ಪಡೆಯದೆ ಜೀವ ಹೋದರೆ ಫಲವೇನು?

              -ಸೋಮೇಶ್ ಎನ್ ಗೌಡ

Tuesday, 26 February 2013

ಅವ ಮುದ್ದಾಡಿದ

ಅವ ಮುದ್ದಾಡಿದ
ತಣ್ಣನೆ ಗಾಳಿಲಿ ಕಚಗುಳಿಯಿಡುತ
ಅಕ್ಕರೆಯ ಮಾತಿನಲೇ ಕವಿತೆಗಳ ಗೀಚುತ
ಹಾಡುವ ದ್ವನಿಯಲ್ಲಿ ನನ್ನೆಸರ ಕೂಗುತ
ಮೋಡಗಳ ಮರೆಯಲ್ಲಿ ನನ್ನನ್ನು ತಬ್ಬುತ

ಅವ ಮುದ್ದಾಡಿದ
ಪ್ರೇಮದ ಒಳಗಿರೋ ಪುಷ್ಪವ ತೋರಿಸಿ
ಪ್ರೀತಿಯ ಮುಕುಟಕೆ ನನ್ನನೆ ಹೋಲಿಸಿ
ನೋಟವ ಬೆರೆಸಿ,ಭಯವನು ಸರಿಸಿ
ಒಲವಲಿ ಬದುಕುವ ಸೂತ್ರವ ಕಲಿಸಿ

ಅವ ಮುದ್ದಾಡಿದ
ಹೃದಯವು ನಾಚುವ ನರ್ತನ ಮಾಡಿ
ಚಿಲಿಪಿಲಿ ಹಕ್ಕಿಯ ಜೊತೆಯಲಿ ಕೂಡಿ
ತರ ತರ ಹೂಗಳ ಎರಚುತ ಹಾಡಿ
ಈ ಹೃದಯಕೆ ಮಾಡುತ ಪ್ರೀತಿಯ ಮೋಡಿ

ಅವ ಮುದ್ದಾಡಿದ..!!!

-ಸೋಮೇಶ್ ಎನ್ ಗೌಡ

Thursday, 21 February 2013

ಗದ್ದೆ ಪಕ್ಕದ ಹೊಲದಲ್ಲಿ

ಗದ್ದೆ ಪಕ್ಕದ ಹೊಲದಲ್ಲಿ
ಉದ್ದುದ್ದ ನಿಂತಿದ್ದ ಜೋಳದ ನಡುವಲ್ಲಿ
ಮುದ್ದಾಡಿ ಹೋದವನ
ನೆನಪೇಕೋ ಇಂದು
ಈ ಪೆದ್ಡಿ ಮನದಲ್ಲಿ
ಗಿರಗಿಟ್ಲೆ ಹೊಡೆಯುತ್ತಿದೆ

ಮಂಜು ಮಂಜಿನ ಮುಸುಕಲ್ಲಿ
ಅಂಜುತ್ತಾ ನಿಂತಿದ್ದ ನನ್ನಯ ಎದೆಯಲ್ಲಿ
ಮತ್ತೇರಿಸಿ ಹೋದ
ನನ್ನಯ ನಲ್ಲನ
ನೆನಪುಗಳೇಕೋ ಇಂದು
ನನ್ನ ಕಾಡುತ್ತಿವೆ

ಓಡೋಡಿ ಬಂದು ಕೆಸರಲ್ಲಿ
ಮಲ್ಲಿಗೆ ಇಟ್ಟು ಮುಡಿಯಲ್ಲಿ
ಪರಿಮಳವ ಹೀರುತ್ತಾ
ಕಣ್ಣಲ್ಲೇ ಕುಕ್ಕುತ್ತಾ
ನನ್ನ ಮೌನಿ ಮಾಡಿದವನ
ನೆನಪುಗಳಿಂದು
ಎಡೆಬಿಡದೆ ಕೆಣಕುತ್ತಿವೆ..
ಕೇಳು ಏಕೆಂದು??

  ಸೋಮೇಶ್ ಎನ್ ಗೌಡ