Thursday, 5 September 2013

ದೀಪವ ಹಚ್ಚುತಾ

ದೀಪವ ಹಚ್ಚುತಾ
ಧೀರನ ನೆನೆದಳು
ದೇಗುಲದಂತ ಮನಸಿನಲಿ
ದೇಶವ ಕಾಯುತ
ಧೈರ್ಯದಿ ನುಗ್ಗುತ
ವೈರಿಯ ಹುಟ್ಟಡಗಿಸೋ
ಮನಧೀರನ  ಹರಸುತಲಿ
ವರವನು ಬೇಡುತ
ಮನದಲೆ ಹಾಡುತ
ಮೆಲ್ಲನೆ ಭಜಿಸಿದಳು ಭಕುತಿಯಲಿ
ತನ್ನೊಡೆಯನಿಗೆ ರಕ್ಷೆಯ
ಕರುಣಿಸೋ ತಂದೆ
ಅವ ದೇಶದ ಕೀರ್ತಿಯ ಬೆಳಗಿಸಲಿ
ಹೆಮ್ಮೆಯ ವೀರನಾಗಿ ಮೆರೆಯುತಿರಲಿ
ಹೆಮ್ಮೆಯ ವೀರನಾಗಿ ಮೆರೆಯುತಿರಲಿ

         -ಸೋಮೇಶ್ ಎನ್  ಗೌಡ

Thursday, 29 August 2013

ನಾ ಬಿಟ್ಟ ಬಾಣ

ನಾ ಬಿಟ್ಟ ಬಾಣ
ಅವನೆದೆಗೆ ತಾಕಿ
ಮೂಡಿಹುದೆ ಪ್ರೀತಿ ಇಂದು
ಒಲವೆಂಬ ಪಯಣ
ಶುರುವಾಗಿ ಅವನ
-ಜೊತೆಯಲ್ಲಿ ಸೇರುವುದೆಂದು?

ನನ್ನವನ ಮೊಗವು
ಹೂ ತುಂಬಿದ ವನವು!
ಸೆಳೆಯುತಿದೆ ದಿನವು ದಿನವೂ
ಪ್ರತಿ ರಾತ್ರಿ ಕನಸ
ಅದುಮಿಟ್ಟು ಮನಸ
ಬೇಯುವುದು ಇನ್ನೆಷ್ಟು ದಿವಸ

ನನ್ನೊಡೆಯಾ ಬಾರೋ
ಹೊಸ ಬೆಳಕ ತೋರೋ
ನೀಡೆನಗೆ ನಿನ್ನ ಹೃದಯ
ಈ ಜೀವ ನಿನ್ನದೆ  ಗೆಳೆಯ
ಈ ಜೀವ ನಿನ್ನದೆ ಗೆಳೆಯ

-ಸೋಮೇಶ್ ಎನ್ ಗೌಡ